ಲಾರ, ಬ್ರಿಯಾನ್ ಚಾಲ್ರ್ಸ್
1969-. ವೆಸ್ಟ್‍ಇಂಡಿಸ್‍ನ ಖ್ಯಾತ ಕ್ರಿಕೆಟ್ ಆಟಗಾರ. ಪ್ರಪಂಚದ ಸರ್ವಕಾಲೀನ 15 ಶ್ರೇಷ್ಠ ಆಟಗಾರರಲ್ಲೊಬ್ಬ. ಪ್ರಪಂಚದ ನಂ 1 ಬ್ಯಾಟ್ಸ್‍ಮನ್.  ಟ್ರಿನಿಡಾಡ್‍ನ ಕ್ಯಾಂಟರೂ ಸಾಂತಕ್ರೂeóïನಲ್ಲಿ 1969 ಮೇ 2ರಂದು ಜನಿಸಿದ. ಗುಸ್ ಲೋಜಿಕ್ ಈತನ ಕೋಚ್. ಲಾರಾ ಅಪ್ರತಿಮ, ಅತಿವೇಗವಾಗಿ ರನ್ ಪೇರಿಸುವ ಎಡಗೈ ಬ್ಯಾಟ್ಸ್‍ಮನ್. ಔಟಾಗದೇ 501ರನ್ ಮತ್ತು ಟೆಸ್ಟ್ ಪಂದ್ಯದಲ್ಲಿ ಔಟಾಗದೆ 400 ರನ್ ಗಳಿಸಿದ ದಾಖಲೆಗಳು ಇವನ ಹೆಸರಿನಲ್ಲಿವೆ. 1958ರಲ್ಲಿ ಸೋಬರ್ಸ್ ಹೊಂದಿದ್ದ 365 ಟೆಸ್ಟ್‍ರನ್ ದಾಖಲೆಯನ್ನು ಈತ ಮುರಿದ (1994). ಈ ದಾಖಲೆಯನ್ನು ಮ್ಯಾಥ್ಯೂ ಹೈಡನ್ ಮುರಿದ (2003). ಮತ್ತೆ ಈತ ಇಂಗ್ಲೆಂಡ್ ವಿರುದ್ಧ ಔಟಾಗದೇ 400ರನ್ ಮಾಡಿ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಟೆಸ್ಟ್‍ರನ್ ಗಳಿಸಿದ ಪ್ರಪಂಚ ದಾಖಲೆ ಮಾಡಿದ (2004). ಇದರಿಂದಾಗಿ ಅತಿ ಹೆಚ್ಚು ರನ್‍ಗಳಿಕೆಯ ಎರಡು ದಾಖಲೆ ಇವನ ಹೆಸರಿನಲ್ಲಿದೆ. ಡೊನಾಲ್ಡ್ ಬ್ರಾಡ್‍ಮನ್‍ನ ಅನಂತರ ಎರಡು ಬಾರಿ ತ್ರಿಶತಕ ಗಳಿಸಿದ ಆಟಗಾರ ಈತ. 
ಈತ ವೆಸ್ಟ್ ಇಂಡಿಸ್ ತಂಡದ ನಾಯಕನಾಗಿದ್ದ (1997-99). ಈ ಅವಧಿಯಲ್ಲಿ ತಂಡದ ಪ್ರದರ್ಶನ ತೃಪ್ತಿದಾಯಕವಾಗಿರಲಿಲ್ಲ. ಈತ ಆಸ್ಟ್ರೇಲಿಯ ಪ್ರವಾಸದ ವೇಳೆಗೆ ಮತ್ತೆ ನಾಯಕನಾದ (2003). 
ಈತನ ಹೆಸರಿನಲ್ಲಿ ಅನೇಕ ದಾಖಲೆಗಳಿವೆ. ಆಸ್ಟ್ರೇಲಿಯ ವಿರುದ್ಧ ಸಿಡ್ನಿಯಲ್ಲಿ ಪ್ರಥಮ ಟೆಸ್ಟ್ ಪಂದ್ಯವಾಡಿ 277 ರನ್‍ಗಳಿಸಿ, ಮೊದಲ ಟೆಸ್ಟ್‍ನಲ್ಲಿ ದ್ವಿಶತಕಗಳಿಸಿದ ನಾಲ್ಕನೆಯವನೆನಿಸಿದ. 8 ಪ್ರಥಮ ದರ್ಜೆ ಪಂದ್ಯಗಳಲ್ಲಿ 7 ಶತಕಗಳನ್ನು ಬಾರಿಸಿದ ಮೊದಲಿಗನೀತ. ಇದರಲ್ಲಿ ಪ್ರಪಂಚ ದಾಖಲೆಯ ಡರ್‍ಹ್ಯಾಂ ವಿರುದ್ಧದ ಔಟಾಗದ 510ರನ್ ಸೇರಿದೆ. 9830 ರನ್‍ಗಳಿಸಿ ವೆಸ್ಟ್ ಇಂಡಿಸ್ ಪರವಾಗಿ ಸರ್ವಕಾಲಿಕ ಅತ್ಯಧಿಕ ರನ್‍ಗಳಿಸಿದ ಆಟಗಾರನೆನಿಸಿದ (2004). ಅತಿಹೆಚ್ಚು ರನ್‍ಗಳಿ ಸಿದ ಪ್ರಪಂಚದ 4ನೆಯ ಆಟಗಾರ. ಏಳು ದ್ವಿಶತಕಗಳನ್ನೊಳಗೊಂಡ 26 ಶತಕಗಳನ್ನು ಗಳಿಸಿ ವೆಸ್ಟ್ ಇಂಡಿಸ್‍ನಲ್ಲಿ ನಂ.1 ಸ್ಥಾನ ಮತ್ತು ಪ್ರಪಂಚದಲ್ಲಿ 7ನೆಯ ಸ್ಥಾನ ಪಡೆದಿದ್ದಾನೆ. ಪಾಕಿಸ್ತಾನ ತಂಡವೊಂದನ್ನು ಹೊರತುಪಡಿಸಿ ಉಳಿದೆಲ್ಲ ಕ್ರಿಕೆಟ್ ತಂಡಗಳ ವಿರುದ್ಧವೂ ಶತಕಗಳನ್ನು ಗಳಿಸಿದ ದಾಖಲೆ ಇವನದು. ಟೆಸ್ಟ್ ಕ್ರಿಕೆಟ್‍ನಲ್ಲಿ ಒಂದೇ ಓವರಿನಲ್ಲಿ 28 ರನ್‍ಗಳಿಸಿದ ದಾಖಲೆಯೂ ಇವನ ಹೆಸರಿನಲ್ಲಿದೆ. ಶ್ರೀಲಂಕ ಪ್ರವಾಸದಲ್ಲಿ 608ರನ್ ಗಳಿಸಿ, ತಂಡದ ಒಟ್ಟು ಮೊತ್ತದ ಸೇಕಡ 42ರನ್ ಗಳಿಸಿದ ದಾಖಲೆ ಹೊಂದಿದ್ದಾನೆ. ಟೆಸ್ಟ್ ಪಂದ್ಯದಲ್ಲಿ 10,000 ರನ್‍ಗಳಿಸಿದ ನಾಲ್ಕನೆಯ ಆಟಗಾರ (2004). ಒಂದೇ ದಿನದಲ್ಲಿ ಅತ್ಯಧಿಕ 390 ರನ್‍ಗಳಿಸಿದ ದಾಖಲೆ ಇವನದು. ಒಂದೇ ಇನ್ನಿಂಗ್ಸ್‍ನಲ್ಲಿ 72 ಬೌಂಡರಿ ಬಾರಿಸಿದ ದಾಖಲೆಯೂ ಈತನದಾಗಿದೆ (1994). ಈತನಿಗೆ ಅನೇಕ ಪ್ರಶಸ್ತಿಗಳು ಲಭ್ಯವಾಗಿವೆ. ಇವುಗಳಲ್ಲಿ ಬಿ.ಬಿ.ಸಿ. ಸ್ಪೋಟ್ರ್ಸ್ ಪರ್ಸನಾಲಿಟಿ ಆಫ್ ದಿ ಇಯರ್‍ನಲ್ಲಿ ಓವರ್‍ಸೀಸ್ ಪರ್ಸನಾಲಿಟಿ ಪ್ರಶಸ್ತಿ (1994), ವರ್ಷದ ವೈಸ್‍ಡೆನ್ ಕ್ರಿಕೆಟರ್ ಪ್ರಶಸ್ತಿ(1995) ಮುಖ್ಯವಾದುವು. ಈತ ಸಹಜ ಹಾಗೂ ಆಕರ್ಷಕ ಬ್ಯಾಟ್ಸ್‍ಮನ್. ಈತನ ಪ್ರತಿ ಹೊಡೆತವೂ ಪ್ರೇಕ್ಷಕರಲ್ಲಿ ಮಿಂಚಿನ ಪುಳಕವನ್ನು ಮೂಡಿಸುತ್ತದೆ. ಈತನ ಆತ್ಮಕಥೆ ಬೀಟಿಂಗ್ ದಿ ಫೀಲ್ಡ್ (1995).	
(ಡಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ